ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಶ್ರಾವಣದಲ್ಲಿನ ಮೊದಲನೆಯ ಹಬ್ಬ ‘ನಾಗರಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ.
ತಿಥಿ: ಶ್ರಾವಣ ಶುಕ್ಲ ಪಂಚಮಿ
Page Contents
ಇತಿಹಾಸ:
ಕಶ್ಯಪ ಮಹರ್ಷಿಗಳು ಅ೦ದೇಕೋ ಪ್ರಸನ್ನ ಚಿತ್ತರಾಗಿದ್ದರು. ತಮ್ಮ ಪ್ರೀತಿಯ ಮಡದಿಯರಾದ ಕದ್ರು ಮತ್ತು ವಿನುತೆಯರನ್ನ ಪ್ರೀತಿಯಿಂದ ಬಳಿ ಕರೆದು ತಮಗೆ ಬೇಕಾದ ಐಚ್ಛಿಕ ಸ೦ತಾನವನ್ನು ಕೇಳಿಕೊಳ್ಳಲು ಹೇಳುತ್ತಾರೆ. ಗಂಡನ ಮಾತಿನಿಂದ ಮುದಗೊಂಡ ಕದ್ರು ಸಹಸ್ರ ಬಗೆಯ ಸರ್ಪಗಳ ಸಂತಾನ ಬೇಡಿಕೊಳ್ಳುತ್ತಾಳೆ. ಅದರೆ ವೀನಿತೆಯು ತನಗೆ ಸೂರ್ಯನಿಗೆ ಪ್ರತಿ ಸೂರ್ಯನಾಗಿ ಮರೆಯುವ, ಇಂದ್ರನಿಗೆ ಪ್ರತಿ ಇಂದ್ರನಾಗಿ ಪೊರೆಯುವ ಎರಡುಮಕ್ಕಳನ್ನು ವರವಾಗಿ ಬೇಡುತ್ತಾಳೆ. ಪರಸ್ಪರ ಅನ್ಯೋನ್ಯತೆಯಿ೦ದಯಿದ್ದರೂ ಅಕ್ಕಳಾದ ಕದ್ರುವಿಗೆ ತಂಗಿ ತನಗಿಂತ ಹೆಚ್ಚಿನದ್ದನ್ನು ಬೇಡಿದಳಲ್ಲ? ಅನ್ನುವ ಮತ್ಸರ ಮನದೊಳಗೇ ಹೆಡೆ ಬಿಡಿಸಿ ವಿಷಮ ಚಿಂತನೆಗಳು ಹೆಡೆಯಾಡುತ್ತದೆ. ಸವತಿ ಮತ್ಸರದ ಚಿಂತನೆ ದಿನೇ ದಿನೇ ಪ್ರಬಲವಾಗುತ್ತದೆ. ಅದಾಗಲೇ ತಾನು ಬೇಡಿದ ಉರಗ ಸಂತತಿಯಯು ಜನ್ಮ ತಳೆದು ಕೆಲವೊಂದು ಸರ್ಪಗಳನ್ನು ಬಿಟ್ಟರೆ ಮಿಕ್ಕೆಲ್ಲರೂ ಲೋಕ ಕಂಟಕರಾಗಿ ಬ್ರಹ್ಮನ ಸೃಷ್ಟಿಯನ್ನೂ ನಾಶ ಮಾಡಲು ಪಣ ತೊಟ್ಟುಕೊಂಡಿದ್ದವು. ಮೂಲೋಕವೂ ಸರ್ಪಗಳಿಂದ ರಕ್ಷಿಸುವಂತೆ ಮೊರೆಯಿಡುತ್ತವೆ. ಕದ್ರುವಿಗೆ ತನ್ನ ಮಕ್ಕಳ ದುರಾಚಾರದ ಮುಂದೆ ವಿನುತೆಯ ಮಕ್ಕಳು ದೊಡ್ಡವರಾಗಿ ಬೆಳೆಯುತ್ತಾರೆ ಅನ್ನುವ ಭಯದಿಂದ ತಂಗಿಯಾದ ವಿನುತಳಲ್ಲಿ ಮೋಸದ ಪಂಥ ಕಟ್ಟಿ ವಿನುತಾ ಮತ್ತು ಅವಳ ಸಂಗತಿಯನ್ನು ತನ್ನ ದಾಸಿ ಮಾಡಿಕೊಳ್ಳುವ ದುರಾಲೋಚನೆ ಮನದೊಳಗೆ ಮೂಡಿಕೊಳ್ಳುತ್ತದೆ.
ಮಕ್ಕಳನ್ನು ಕರೆದು ಮನದ ಇಂಗಿತವನ್ನು ಮಕ್ಕಳಿಗೆ ಹೇಳಿ ಸಹಾಯಕ್ಕಾಗಿ ಆದೇಶಗಯ್ಯುತ್ತಾಳೆ. ಮಕ್ಕಳು ಒಪ್ಪದಿದ್ದಾಗ ಮುಂದೆ ನಡೆಯುವ ಸರ್ಪಧ್ವರದಲ್ಲಿ ಬಿದ್ದು ಸಾಯುವಂತೆ ಶಪಿಸುತ್ತಾಳೆ. ಆಗಾಗಲೇ ಸಂಕರ್ಷಣ ಭೂಮಿಯನ್ನು ಹೊತ್ತು ನಿಂತರೂ, ಅನಂತ ಹರಿ ತಲ್ಪವಾದರೂ, ವಾಸುಕಿಯು ಅಮೃತವನ್ನು ಕಡೆದು ಕೊಟ್ಟರೂ ತಾಯಿಯ ಶಾಪದಿಂದ ಪರಿಮಾರ್ಜನೆ ಕಾಣದೇ ಹೋಗುತ್ತವೆ. ಶಾಪದ ಶಮನಕ್ಕೆ ಬ್ರಹ್ಮದೇವನನ್ನು ಕೇಳಿಕೊಂಡಾಗ ಸರ್ಪಗಳು ಜಗತ್ತಿಗೆ ನೀಡಿದ ಸೇವೆಗೆ ಪಂಚಮಿಯ ತಿಥಿಯನ್ನು ಸರ್ಪ ಸಂಕುಲಕ್ಕೆ ನೀಡುತ್ತಾನೆ. ಮುಂದೆ ನಡೆಯುವ ಸರ್ಪಯಜ್ಞದಿಂದ ಸರ್ಪ ಸಂಕುಲವನ್ನು ರಕ್ಷಿಸಲು ಜರತ್ಕಾರುವಿನ ಮಗ ಆಸ್ತೀಕ ನಿಮ್ಮನ್ನು ಶಾಪದ ಸಂಕಷ್ಟದಿಂದ ಪರಿಹರಿಸಿ ಪೊರೊಯುತ್ತಾನೆ ಎಂದೂ ಬ್ರಹ್ಮ ಅಭಯ ನೀಡುತ್ತಾನೆ.
ಹೀಗೆ ಯುಗಗಳು ದಾಟಿ ದ್ವಾಪರದಹೊಸ್ತಿಲು ದಾಟಿ ಕಲಿಯುಗವನ್ನು ಹೊತ್ತು ಜಗತ್ತು ನಿಂತಿತ್ತು. ಅದೆಷ್ಟೋ ಪುಣ್ಯ ಯಾಗಗಳನ್ನು ಕಂಡ ಧರಣೀದೇವಿಯು ಸರ್ಪ ಯಾಗದ ಕುಂಡಕ್ಕೆ ತನ್ನ ಸೆರಗನ್ನು ಒಡ್ಡಿದ್ದಳು. ಸರ್ಪ ಸಂಕುಲದ ಸರ್ವನಾಶದ ನಿಮಿತ್ತವಾಗಿ ನಡೆಯುವ ಯಾಗಕ್ಕೆ ಚಕ್ರವರ್ತಿಯಾದ ಜನಮೇಜಯನೇ ಧೀಕ್ಷಾಭದ್ಧನಾಗಿದ್ದನು. ಅದೆಷ್ಟೇ ಶಕ್ತಿಶಾಲಿ ಸರ್ಪವಾದರೂ ಅದರ ಹೆಸರು ಹೇಳಿ ಶಕ್ತಿ ಹರಣ ಮಂತ್ರದಿಂದ ಶಕ್ತಿ ಕುಂದಿಸಿ ಯಾಗ ಕುಂಡಕ್ಕೆ ಬಂದು ಬೀಳುವಂತೆ ಅಭಿಮಂತ್ರಿಸಲಾಗುತ್ತಿತ್ತು. ಹೀಗೆ ಇಡಿಯ ಸರ್ಪ ಸಂಕುಲವೇ ವಿನಾಶದ ಹಾದಿ ಹಿಡಿದಾಗ ಸರ್ಪಗಳ ಏಕೈಕ ತಂಗಿಯ ಮಗನಾದ ಆಸ್ತೀಕ ಮಹಾ ಋಷಿಯು ವಾದದ ಮುಖೇನ ಜನಮೇಜಯನ ಮನಗೆದ್ದು ಯಾಗ ನಿಲ್ಲಿಸಿ ಸರ್ಪಸಂಕುಲಕ್ಕೆ ಜೀವದಾನ ನೀಡಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ಪುಣ್ಯ ದಿನವೇ ನಾಗರ ಪಂಚಮಿ ಅನ್ನುವ ಅನ್ವರ್ಥ ನಾಮ ಪಡೆಯುತ್ತದೆ. ಶಕ್ತಿ ಹರಣ ಮಂತ್ರದಿಂದ ನಿಶಕ್ತರಾದ ಸರ್ಪ ಸಂಕುಲಕ್ಕೆ ಅಶ್ಲೇಷಾ ನಕ್ಷತ್ರದಲ್ಲಿ ಅನ್ನದ ಚರ್ವದಲ್ಲಿ ಬಲಿ ಪೂಜೆ ಮಾಡಿ ಮರಳಿ ಶಕ್ತಿ ತುಂಬಿಸಿದ ಬಲಿಪೂಜೆಯೇ ಅಶ್ಲೇಷಾ ಬಲಿ ಪೂಜೆ.
ನಾಗರ ಪಂಚಮಿಯಂದು ಮಾಡಿದ ಉಪವಾಸದ ಮಹತ್ವ:
5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕನಿಷ್ಠ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ನಾಗನ ಪೂಜೆ ಮಾಡುವುದರ ಹಿಂದಿನ ಶಾಸ್ತ್ರ ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
ನಾಗನ ಮಹಾತ್ಮೆ:
- ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರವನ್ನು ತೆಗೆದುಕೊಂಡಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.
- ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಳಿಂಗ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.
- ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು’, ಎಂದು ಗೀತೆಯಲ್ಲಿ (10.29) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ||
ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.
ಪೂಜೆ:
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀ ಕಣಗಳು (ಚೈತನ್ಯಕಣಗಳು).
ಭಾವಾರ್ಥ:
ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಕಲಿಯುವುದಿರುತ್ತದೆ.
ನಿಷೇಧ:
ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು.