ಕುಂಜಾರುಗಿರಿ ದೇವಸ್ಥಾನ – ಉಡುಪಿ

0Shares

ಕುಂಜಾರುಗಿರಿ ದೇವಸ್ಥಾನ ಉಡುಪಿಯಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಒಂದು. ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಈ ದೇವಸ್ಥಾನ ಆಸ್ತಿಕರ ನಂಬಿಕೆಯ ಪ್ರಸಿದ್ಧ ಕ್ಷೇತ್ರ ಹೇಗೋ, ಪರಿಸರ ಸೌಂದರ್ಯ ಆರಾಧಕರಿಗಂತೂ ಸ್ವರ್ಗ. ಕೃಷ್ಣ ಮಠದ ಸ್ಥಾಪಕರಾದ ಮಧ್ವಾಚಾರ್ಯರ ಹುಟ್ಟೂರ ಪಕ್ಕವೇ ಇರುವ ಈ ಗುಡ್ಡದಿಂದ ಸಮುದ್ರ ಮತ್ತು ಪಶ್ಚಿಮ ಘಟ್ಟ, ಎರಡರ ಚೆಲುವನ್ನೂ ಕಣ್ತುಂಬಿಸಿಕೊಳ್ಳಬಹುದು.

ಕುಂಜಾರುಗಿರಿ ಉಡುಪಿ

ಕುಂಜಾರು ಗಿರಿ ಬೆಟ್ಟ ಮೇಲಿನ ನೋಟ

ತುಳುನಾಡು ಪರಶುರಾಮ ಸೃಷ್ಟಿ ಎಂದು ಜನರ ನಂಬಿಕೆ. ಕುಂಜಾರುಗಿರಿಯಲ್ಲಿ ಪರಶುರಾಮ ದೇವಸ್ಥಾನವೂ ಇದೆ. ಪರಶುರಾಮ ನಿರ್ಮಿಸಿದ್ದ ಎನ್ನಲಾಗುವ ನಾಲ್ಕು ಕೆರೆಗಳು ಸುತ್ತಮುತ್ತಲಿವೆ. ಅದರಲ್ಲೊಂದು ಗದಾ ತೀರ್ಥ. ಕುಂಜಾರು ಗಿರಿಯ ದುರ್ಗೆಗೆ ಪ್ರತೀ ನಿತ್ಯ ಇಲ್ಲಿನ ತೀರ್ಥದ ಅಭಿಷೇಕ.

ಕುಂಜಾರುಗಿರಿ ಪರಶುರಾಮ ಬೆಟ್ಟ

ಪರಶುರಾಮ ದೇವಸ್ಥಾನ ಮೇಲಿನ ನೋಟ

ದೇವಸ್ಥಾನದಲ್ಲಿ ದೇವರ ಅಭಿಷೇಕಕ್ಕಾಗಲೀ, ನೈವೇದ್ಯಕ್ಕಾಗಲಿ ಬೇಕಾದ ನೀರು, ತೀರ್ಥವನ್ನು ಪುರೋಹಿತರು ಈ ಗದಾ ತೀರ್ಥದಿಂದಲೇ ತರಬೇಕು. ಯಾವುದೇ ವಾಹನ, ಮೋಟರ್ ಪಂಪು ಬಳಸುವುದಿಲ್ಲ. ಮುಂಜಾನೆ ಎದ್ದು ಆ ಚಳಿಗೂ ಗದಾ ತೀರ್ಥದಲ್ಲಿ ಮುಳುಗು ಹಾಕಿ, ಅರ್ಧ ಮುಳುಗಿದ್ದೇ ಮಂತ್ರ ಜಪಿಸಿ, ತಂದಿರುವ ತಾಮ್ರದ ಕೊಡಪಾನದಲ್ಲಿ ನೀರು ತುಂಬಿಸಿ, ತಲೆಯಲ್ಲಿ ಹೊತ್ತು, ಬರಿಕಾಲಲ್ಲೇ ನಡೆದು, ರಸ್ತೆ ದಾಟಿ, ದೇವಸ್ಥಾನದ ಪಶ್ಚಿಮಕ್ಕಿರುವ 256 ಮೆಟ್ಟಿಲುಗಳನ್ನು ಹತ್ತಿ ದೇವರ ಗರ್ಭಗುಡಿ ಪ್ರವೇಶಿಸುತ್ತಾರೆ.

ಕುಂಜಾರುಗಿರಿ ದೇವಸ್ಥಾನ ಗದಾ ತೀರ್ಥ

ಕುಂಜಾರುಗಿರಿ ದೇವಸ್ಥಾನ ಬೆಳಿಗ್ಗೆ ಶ್ರೀವತ್ಸ

ಕುಂಜಾರುಗಿರಿ ದೇವಸ್ಥಾನ ಬೆಳಿಗ್ಗೆ ಶ್ರೀವತ್ಸ ಗದಾ ತೀರ್ಥ

ಶ್ರೀವತ್ಸ ಭಟ್ರಂತೂ ಒಮ್ಮೆ ತುಂಬಿದ ತಾಮ್ರದ ಕೊಡಪಾನವನ್ನು ತಲೆಯ ಮೇಲಿಟ್ಟರೆ ಮತ್ತೆ ದೇವಸ್ಥಾನ ತಲುಪುವವರೆಗೂ ಕೊಡಪಾನಕ್ಕೆ ಕೈ ತಾಗಿಸುವುದಿಲ್ಲ. ನಿಜಕ್ಕೂ ಈ ದೃಶ್ಯ, ಭಟ್ರ ಸಾಹಸವನ್ನು ನೀವು ಕಣ್ತುಂಬಿಸಿಕೊಳ್ಳಲೇಬೇಕು. ಯಾವುದೇ ಭಾರವಿಲ್ಲದೆಯೇ ನಾವೆಲ್ಲ ಮೆಟ್ಟಿಲು ಹತ್ತಿ, ನಡೆದು ಹೋಗುವಾಗ ಏದುಸಿರು ಬಿಡುತ್ತೇವೆ. ಆದರೆ ಭಟ್ರ ಶಕ್ತಿ ಮತ್ತಿ ಭಕ್ತಿ ನಿಜಕ್ಕೂ ಶ್ರೇಷ್ಠ.

ಕುಂಜಾರುಗಿರಿ ಶ್ರೀವತ್ಸ ಕುಂಜಾರುಗಿರಿ ದೇವಸ್ಥಾನ ಬೆಳಿಗ್ಗೆ ಶ್ರೀವತ್ಸ 256 ಮೆಟ್ಟಿಲು

ಒಂದು ಕೊಡಪಾನ ಶ್ರೀವತ್ಸ ಭಟ್ರು ತೆಗೆದುಕೊಂಡು ಹೋದರೆ, ಮತ್ತೊಂದು ಕೊಡಪಾನವನ್ನು ರಮೇಶ್ ಭಟ್ರು ಕೊಂಡು ಹೋಗುತ್ತಾರೆ. ಕೆಳಗಡೆ ಇರುವ ಮಧ್ವಾಚಾರ್ಯರ ಮೂರ್ತಿಗೆ ಪೂಜೆ ಮಾಡುವ ಪುರೋಹಿತರಿವರು. ದೇವಿಗೆ ಒಟ್ಟು 6 ಕೊಡಪಾನ ತೀರ್ಥ ಬೇಕು. ಇನ್ನುಳಿದ ನಾಲ್ಕನ್ನು ಹಿರಿಯ ಭಟ್ರೋರ್ವರು ಹೊತ್ತು ಬರಿಕಾಲಲ್ಲೇ ಸಾಗುತ್ತಾರೆ.

ಕುಂಜಾರುಗಿರಿ ದೇವಸ್ಥಾನ ಬೆಳಿಗ್ಗೆ

ನಾನಿಂದು ಬೆಳಿಗ್ಗೆ 6 ಗಂಟೆಗೆ ಕುಂಜಾರುಗಿರಿ ತಲುಪಿ, ಕಾಳಿಂಗನ ಜೊತೆ ಪರಶುರಾಮ ಬೆಟ್ಟ ಹತ್ತುತ್ತಿದ್ದೆ. ಆಗ ಗದಾ ತೀರ್ಥ ಕೆರೆಯಲ್ಲಿ ಓರ್ವರು ಅರ್ಧ ಮುಳುಗಿ ಸಂಧ್ಯಾವಂದನೆ ಮಾಡುತ್ತಿದ್ದರು. ಆಕರ್ಷಣೆಯಾಗಿ ಅಲ್ಲಿಗೆ ಹೊರಟವನು ದೇವಿಯ ಅಭಿಷೇಕದ ಸಾಹಸದ ತೀರ್ಥಯಾತ್ರೆ ನನಗೂ ಲಭಿಸಿತು.

ಅದೆಷ್ಟು ಸಲ ಆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೋ, ಲೆಕ್ಕವಿಲ್ಲ. ಒಮ್ಮೆಯೂ ಮೆಟ್ಟಿಲು ಹತ್ತಿರಲಿಲ್ಲ. ಭಟ್ರ ಜೊತೆಗೆ, ದೇವಿಯ ಜಳಕಕ್ಕೆ ಬೇಕಾದ ತೀರ್ಥದ ಜೊತೆಗೆ ನಾನೂ 256 ಮೆಟ್ಟಿಲು ಹತ್ತಿದೆ. ಬನ್ನಿ, ನೀವೂ ಹತ್ತಿ. ಭಟ್ರ ಜೊತೆಗೆ ತೀರ್ಥಯಾತ್ರೆಯ ಅನುಭವ ನಿಮಗೂ ಆಗಲಿ. ಆದರೆ ಕನಿಷ್ಠ ಆರು ಗಂಟೆಗಾದರೂ ಗದಾತೀರ್ಥದ ಸಮೀಪ ಇರಬೇಕು.

See also  ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ - ಉಡುಪಿ

ಗದಾತೀರ್ಥದಲ್ಲಿ ಯಾರು ಬೇಕಾದರೂ ಮುಳುಗು ಹಾಕಬಹುದು. ಆದರೆ ಸಾಬೂನು ಬಳಸುವಂತಿಲ್ಲ. ನೈರ್ಮಲ್ಯ ಕಾಪಾಡಬೇಕು.

ಬರಹ : ಮಂಜುನಾಥ್ ಕಾಮತ್

0Shares

Leave a Reply

error: Content is protected !!