ಕಾಶಿ ಕ್ಷೇತ್ರಪಾಲಕಿ, ರಕ್ಷಕಿ ಮಾ ವರಾಹಿ ದೇವಿ

0Shares

ಕಾಶಿ ಕ್ಷೇತ್ರಪಾಲಕಿ ವರಾಹಿ ದೇವಿ

ಕಾಶೀ ಖಂಡದ ದಂತಕಥೆಗಳು ಸತೀದೇವಿಯ ಕೆಳ ಹಲ್ಲುಗಳು ಬಿದ್ದು ಸ್ಥಳವೇ ಪಂಚಸಾಗರ ಶಕ್ತಿ ಪೀಠ ಎಂದು ಹೇಳುತ್ತೇವೆ. ಇಲ್ಲಿ ದೇವಿಯನ್ನು ಮಾ ವರಾಹಿ ಎಂದು ಪೂಜಿಸಲಾಗುತ್ತದೆ. ಪಂಚಸಾಗರ ಶಕ್ತಿ ಪೀಠವು ಉತ್ತರಪ್ರದೇಶದ ವಾರಣಾಸಿ ಬಳಿ ಇದೆ.

ಸಪ್ತಮಾತೃಕೆಯರಲ್ಲಿ ಮಾ ವರಾಹಿಯೂ ಒಬ್ಬಳು. ಹಂದಿಯ ತಲೆಯೊಂದಿಗೆ ಸ್ತ್ರೀ ರೂಪದ ಕುತ್ತಿಗೆಯನ್ನು ಹೊಂದಿರುವ ಮಾ ವರಾಹಿಯನ್ನು ವರಾಹದ ಸ್ತ್ರೀರೂಪಿ ಶಕ್ತಿ ಎಂದು ಪರಿಗಣಿಸಲಾಗಿದೆ. ಭಾರತದ ದಕ್ಷಿಣ ಮತ್ತು ಪೂರ್ವದಲ್ಲಿ ವರಾಹಿ ದೇವಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಕಾಶಿಯಲ್ಲಿರುವ ಮಾ ವರಾಹಿ ದೇವಿಯು ಕಾಶಿಯ ಗ್ರಾಮದೇವತೆಯಾಗಿ, ಕಾಶಿಯ ರಕ್ಷಕಳಾಗಿದ್ದಾಳೆ. ಅವಳು ನಗರವನ್ನು ದುಷ್ಟಶಕ್ತಿಗಳಿಂದ ರಕ್ಷಿಸುತ್ತಾಳೆ. ಮಾತೆಯಾದ ದುರ್ಗಾದೇವಿಯು ರಾಕ್ಷಸರೊಡನೆ ಹೋರಾಡುವಾಗ ಮಾ ವರಾಹಿಯು ಆಕೆಯ ಸೇನಾಧಿಪತಿಯಾಗಿದ್ದಳು ಎನ್ನುವರು.

ವರಾಹಿ ದೇವಿ

ಕಾಶಿಯಲ್ಲಿ ಭೇಟಿ ನೀಡಲೇ ಬೇಕಾದ ದೇವಾಲಯ ಮಾ ವರಾಹಿಯದು. ಕಾಶಿ ವಿಶ್ವನಾಥನ ದೇಗುಲದಿಂದ ಕಾಲ್ನಡಿಗೆಯ ದೂರದಲ್ಲಿ ಮನ್ಮಂದಿರ ಘಾಟ್ ನಲ್ಲಿ ನೆಲೆಗೊಂಡಿರುವ ಮಾ ವರಾಹಿ ದೇಗುಲವನ್ನು ತ್ರಿಪುರ ಭೈರವಿ ಘಾಟ್ ಮತ್ತು ದಶಾಶ್ವಮೇಧ ಘಾಟ್ ನಿಂದ ಪ್ರವೇಶಿಸಬಹುದು. ಉಗ್ರಸ್ವರೂಪಿಯಾದ ಮಾ ವರಾಹಿ ದೇವಿಯ ಮುಖ್ಯ ವಿಗ್ರಹವು ‘ಪಾತಾಳ ಲೋಕ’ ಎಂದು ಪರಿಗಣಿಸುವ ಮಟ್ಟದಲ್ಲಿ ದೇವಾಲಯದ ನೆಲಮಾಳಿಗೆಯಲ್ಲಿ ನೆಲೆಗೊಂಡಿದೆ. ದೇವಿಯ ಶಕ್ತಿಯು ಅತ್ಯಂತ ಶಕ್ತಿಯುತವಾಗಿದೆ ಎಂದು ನಂಬಲಾಗಿದೆ. ಸಂಪ್ರದಾಯಗಳ ಪ್ರಕಾರ ಅರ್ಚಕರು ಮಾತ್ರ ನೆಲಮಾಳಿಗೆಯ ದೇವಾಲಯದಲ್ಲಿ ಇರಲು ಅನುಮತಿಸಲಾಗಿದೆ. ಮಾತೆಯ ದರ್ಶನಕ್ಕೆ ಕರೆದಾಗ, ನೆಲಮಾಳಿಗೆಯ ಮೇಲಿನ ಒಂದು ರಂಧ್ರದ ಮೂಲಕ ಅವಳ ಮುಖವನ್ನು ಮತ್ತು ಇನ್ನೊಂದು ರಂಧ್ರದ ಮೂಲಕ ಪಾದಗಳ ದರ್ಶನವನ್ನು ನಾವು ಪಡೆಯಬಹುದು. ನಾವು ಅವಳನ್ನು ನೋಡುವುದು ಕೇವಲ ಒಂದು ಕ್ಷಣವಾದರೂ, ಆಕೆಯ ಅಗಾಧ ಶಕ್ತಿಯ ಅರಿವನ್ನು ಅನುಭವಿಸುವೆವು.

ಮಾ ವರಾಹಿಯ ಕೈಯಲ್ಲಿ ಚಕ್ರ, ಶಂಖ ಮತ್ತು ಇತರೆ ಆಯುಧಗಳಿವೆ. ಮಾ ವರಾಹಿಯನ್ನು ಶಿವಭಕ್ತರು, ವೈಷ್ಣವರು ಶಕ್ತಿ ಪೀಠವಾಗಿ ಪೂಜಿಸುತ್ತಾರೆ. ಭಕ್ತಾದಿಗಳಲ್ಲಿ ಕೆಲವರು ವಿವಿಧ ಹೂವುಗಳ ಮಾಲೆಗಳನ್ನು, ವಿಶೇಷವಾಗಿ ದಾಸವಾಳವನ್ನು ಅರ್ಪಿಸುತ್ತಾರೆ.

ಒಂದು ಉಲ್ಲೇಖದ ಪ್ರಕಾರ ವರಾಹಿ ದೇವಿಯು ರಾಕ್ಷಸನನ್ನು ಕೊಲ್ಲಲು ಭಗವಾನ್ ವಿಷ್ಣುವಿನ (ವರಾಹ-ಹಂದಿ ರೂಪ) ಅವತಾರದಿಂದ ಶಿವನಿಂದ ಸೃಷ್ಟಿಸಲ್ಪಟ್ಟಳು. ಕಾಶಿ ಖಂಡದ ಪ್ರಕಾರ, ಶಿವನು ಅರವತ್ನಾಲ್ಕು ಯೋಗಿಗಳನ್ನು ಕಾಶಿಗೆ ಕಳುಹಿಸಿ ರಾಜ ದಿವೋದಾಸನ ಆಡಳಿತವನ್ನು ಅಡ್ಡಿಪಡಿಸಿದನು. ಆದರೆ ನಂತರ ಯೋಗಿನಿಯರು ಕಾಶಿಯ ಸೌಂದರ್ಯಕ್ಕೆ ಎಷ್ಟು ಪುಳಕಿತರಾದರು ಎಂದರೆ ಅವರು ಕಾಶಿಯಲ್ಲಿ ನೆಲೆಸಲು ನಿರ್ಧರಿಸಿದರು. ಅವರಲ್ಲಿ ವರಾಹಿಯೂ ಒಬ್ಬಳು.

ವರಾಹಿ ದೇವಿಯು ಕಾಶಿ ಕ್ಷೇತ್ರದಲ್ಲಿ ರಾತ್ರಿಯ ಸಮಯದಲ್ಲಿ ಸಂಚರಿಸುತ್ತಾಳೆ ಎಂದು ಹೇಳಲಾಗುತ್ತದೆ. ಅವಳು ಬೆಳಿಗ್ಗೆ ದೇವಾಲಯವನ್ನು ಪ್ರವೇಶಿಸುತ್ತಾಳೆ. ಮುಂಜಾನೆ ಅರ್ಚಕರು ಪೂಜೆಯನ್ನು ಪೂರ್ಣಗೊಳಿಸುತ್ತಾರೆ. ಬೆಳಗಿನ ಧಾರ್ಮಿಕ ಕ್ರಿಯೆಗಳ ನಂತರ, ಸೂರ್ಯ ಮುಳುಗುವವರೆಗೆ ದೇವಿಯು ವಿಶ್ರಾಂತಿ ಪಡೆಯುತ್ತಾಳೆ. ಆದುದರಿಂದ ಆಗ ಮಾ ವರಾಹಿ ದೇವಾಲಯದ ಮುಖ್ಯ ಬಾಗಿಲನ್ನು ಮುಚ್ಚಲಾಗುತ್ತದೆ!

ಹಗಲಿನಲ್ಲಿ ಕಾಶಿಗೆ ರಕ್ಷಣೆಯನ್ನು ಭಗವಾನ್ ಕಾಲಭೈರವನಿಗೆ (ಕ್ಷೇತ್ರ ಪಾಲಕ) ಮತ್ತು ರಾತ್ರಿಯಲ್ಲಿ ದೇವತೆ ವರಾಹಿ ದೇವಿಗೆ (ಕ್ಷೇತ್ರ ಪಾಲಿಕಾ) ನೀಡಲಾಗುತ್ತದೆ. ವರಾಹಿ ಮಾತೆಯು ರಾತ್ರಿಯ ಸಮಯದಲ್ಲಿ ಕಾಶಿಯನ್ನು ರಕ್ಷಿಸುತ್ತಾಳೆ.

ಆಚರಣೆಗಳು:

ದೇವಾಲಯವು ಬೆಳಿಗ್ಗೆ 4.00 ರಿಂದ 9.30 ರವರೆಗೆ ಮಾತ್ರ ತೆರೆದಿರುತ್ತದೆ ಮತ್ತು ಇಡೀ ದಿನ ಮುಚ್ಚಿರುತ್ತದೆ. ಅರ್ಚಕರು ಮುಂಜಾನೆ 4.00 ರಿಂದ 5.30ರವರೆಗೆ ಎಲ್ಲಾ ರೀತಿಯ ಪೂಜೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆರತಿಯನ್ನು ಬೆಳಿಗ್ಗೆಯೇ ಮಾಡಲಾಗುತ್ತದೆ, ಈ ಸಮಯದಲ್ಲಿ ಮುಖ್ಯ ಬಾಗಿಲನ್ನು ಮುಚ್ಚಲಾಗುತ್ತದೆ. ಆದಾಗ್ಯೂ, ಭಕ್ತನು ಒಳಗಿದ್ದರೆ, ಭಕ್ತನು ಆರತಿಯನ್ನು ನೋಡುತ್ತಾನೆ. ಆರತಿಯನ್ನು ಮಾಡಿದ ನಂತರ, ದೇವಾಲಯವು ದರ್ಶನಕ್ಕಾಗಿ ಸ್ವಲ್ಪ ಸಮಯದವರೆಗೆ ತೆರೆದಿರುತ್ತದೆ. ನಂತರ ಬಾಗಿಲು ಮುಚ್ಚಲ್ಪಡುತ್ತದೆ. ಭಕ್ತರಿಗೆ 5.30ರಿಂದ 9.30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಹಬ್ಬಗಳು ಮತ್ತು ಜಾತ್ರೆಗಳು:

ನವರಾತ್ರಿಯಲ್ಲಿ ದುರ್ಗಾ ಪೂಜೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನವರಾತ್ರಿಯನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ, ಅಂದರೆ ಏಪ್ರಿಲ್ (ಚೈತ್ರ ಮಾಸ) ಮತ್ತು ಸೆಪ್ಟೆಂಬರ್- ಅಕ್ಟೋಬರ್ (ಆಶ್ವಿಜ). ಪ್ರತಿದಿನ ವರಾಹಿ ದೇವಿಗೆ ಅನ್ನ ಬೋಗ್ ಅರ್ಪಿಸಲಾಗುತ್ತದೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನವರಾತ್ರಿ ಜಾತ್ರೆ ನಡೆಯುತ್ತದೆ.

0Shares

Leave a Reply

error: Content is protected !!