ಅರುಣೋದಯ ಅಂದ ಕೂಡಲೇ ಸೂರ್ಯನ ಉದಯವಾಯಿತು ಎಂದು ಅರಿತಿರುವರು! ನಿಜ. ಆದರೆ ಹಲವರಿಗೆ ಅರುಣ ಅಂದರೆ ಸೂರ್ಯ ಎಂದು ತಿಳಿದವರೇ ಹೆಚ್ಚು. ಅರುಣ ಯಾರೆಂದು ತಿಳಿಯಲು ಈ ಸಂಕ್ಷಿಪ್ತ ಇತಿಹಾಸ ಓದಿ.
ಯುಗಗಳ ಹಿಂದೆ ಕಶ್ಯಪ ಮಹರ್ಷಿಗಳು ದಕ್ಷ ಪ್ರಜಾಪತಿಯ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದರು. ಅದರಲ್ಲಿ ಕದ್ರು ಮತ್ತು ವಿನಿತ ಎಂಬ ಪತ್ನಿಯರು ಪತಿಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುತ್ತಿದ್ದರು. ಪತ್ನಿಯರ ಈ ನಿಸ್ವಾರ್ಥ ಪತಿಭಕ್ತಿ ಸೇವೆಯನ್ನು ಕಶ್ಯಪ ಮಹರ್ಷಿಗಳು ಮೆಚ್ಚಿ ಪತ್ನಿಯರಾದ ಕದ್ರು ಮತ್ತು ವಿನಿತ ಯರಿಗೆ ನಿಮಗೆ ವರಕೊಡಲು ಮನಸ್ಸಾಗುತ್ತಿದೆ, ಪ್ರಕೃತಿಗೆ ಅನುಕೂಲಕರವಾದ ಬೇಕಾದ ವರಕೇಳಿ ಎಂದರು. ಸೋದರಿಯರಿಬ್ಬರೂ ಸಂತೋಷಿತರಾಗಿ ಪ್ರಕೃತಿಗೆ ಅನುಕೂಲವಾಗುವಂತೆ ವರ ಪಡೆಯಲು ಯೋಚಿಸಿ ಮೊದಲ ಕದ್ರು ತನಗೆ ಸರ್ಪಕುಲದ ಪರಾಕ್ರಮಿಶಾಲಿಗಳಾದ ಅನೇಕ ಮಕ್ಕಳು ಬೇಕು ಎಂದು ಪ್ರಾರ್ಥಸಿದಳು. ವಿನಿತ ತನಗೆ ಕದ್ರುವಿನ ಮಕ್ಕಳಿಗಿಂತ ಬಲಶಾಲಿಗಳಾದ ಇಬ್ಬರು ಮಕ್ಕಳು ಬೇಕೆಂದು ಬೇಡಿದಳು. ಕಶ್ಯಪ ಮಹರ್ಷಿಗಳು ಪತ್ನಿಯರಿಗೆ ತಥಾಸ್ತು ಎಂದೇಳಿದರು.
ವರ ಪಡೆದಂತೆ ಕದ್ರು ಮತ್ತು ವಿನಿತ ಗರ್ಭಧರಿಸಿ ತಮ್ಮ ಗರ್ಭ ದೊಡ್ಡದಾಗುತ್ತಿದ್ದಂತೆ ಆ ಭಾರ ತಡೆಯಲಾರದೆ ಈಗಿನಂತೆ (ಆಧುನಿಕತೆಯಂತೆ ಟೆಸ್ಟ್ ಟ್ಯೂಬ್ ಬೇಬಿ ಪಡೆಯುವಂತೆ) ಕೃತಕ ಗರ್ಭಗಳನ್ನು ನಿರ್ಮಿಸಿ ಗರ್ಭ ಪೋಷಣೆ ಮಾಡುತ್ತಿರುತ್ತಾರೆ. ನಂತರ ಕದ್ರುವಿಗೆ ೫೦೦ ವರ್ಷಗಳ ನಂತರ ಸರ್ಪಕುಲದ ಬಲಶಾಲಿಗಳಾದ ಶೇಷನಾಗ, ತಕ್ಷಕ, ಕಾರ್ಕೊಟಕ, ವಾಸುಕಿ ಮುಂತಾದ ಅನೇಕರ ಜನ್ಮವಾಗುತ್ತದೆ. ಆದರೆ ವಿನಿತಯ ಎರಡು ಗರ್ಭವು ಇನ್ನೂ ಹಲವು ವರ್ಷಗಳಾದರೂ ಮಕ್ಕಳಾಗದೇ ಇರಲು ಜೊತೆಗೆ ತನ್ನ ಸೋದರಿ ಕದ್ರು ನೂರಾರು ಮಕ್ಕಳೊಂದಿಗೆ ಲಾಲನೆ ಪಾಲನೆಯಲ್ಲಿ ತೋಡಗಿರುವುದನ್ನು ಕಂಡು ಅಸೂಯೆಯಿಂದ ಸಹಿಸಲಾರದೆ ಒಂದು ಗರ್ಭವನ್ನು ತಾನೇ ಹೊಡೆದು ನೋಡುವಳು, ಕೃತಕ ಗರ್ಭದಲ್ಲಿದ್ದ ಮಗುವನ್ನು ನೋಡಿ ಗಾಬರಿಯಾಗುವಳು!! ಕಾರಣ ಆ ಮಗು ಪೂರ್ಣವಾಗಿ ಬೆಳೆಯದೇ ಅಂದರೆ ಕಾಲುಗಳು ಇನ್ನೂ ಬೆಳೆದೆ ಇರುವುದಿಲ್ಲ!
ಆ ಮಗುವು ತನ್ನ ತಾಯಿಯ ಈ ಅಸೂಯೆಯಿಂದ ಮಾಡಿದ ಅಚಾತುರ್ಯಕ್ಕೆ ಮನನೊಂದ, ಅಮ್ಮ ನಿನ್ನ ಈ ಕಾರ್ಯ ಪ್ರಕೃತಿ ವಿರುದ್ಧವಾದದ್ದು. ನಿನಗೆ ಈ ಶಾಪ ತಟ್ಟದೇ ಬಿಡುವುದಿಲ್ಲ, ನೀನು ನಿನ್ನ ಸಹೋದರಿ ಕದ್ರುವಿನ ದಾಸಿಯಾಗಿ ಅವರ ಮಕ್ಕಳ ಸೇವೆಯನ್ನು ಮಾಡಿಕೊಂಡು ವರ್ಷಗಳನ್ನು ಕಳೆಯುವೆ. ಜೊತೆಗೆ ನನ್ನಂತೆ ಇನ್ನೊಂದು ಗರ್ಭವನ್ನು ಹೊಡೆಯದೇ ಕಾಪಾಡಿಕೊಂಡು ಇರು. ಅದರಲ್ಲಿ ಹುಟ್ಟುವ ಮಗನಿಂದಲೇ ನಿನ್ನ ದಾಸ್ಯಮುಕ್ತಿಯಾಗುತ್ತದೆ ಎಂದು ನೊಂದು ಹೇಳಿ. ನಾ ನಿನ್ನೊಂದಿಗೆ ಇರಲಾರೆ ಎಂದೇಳಿ. ತನ್ನ ಜನ್ಮ ಕಾರಣವನ್ನು ತಿಳಿದು ಸೂರ್ಯಲೋಕ ತಲುಪಿ, ಭಗವಾನ್ ಸೂರ್ಯನಾರಾಯಣನ ರಥದ ಸಾರಥಿಯಾಗುವನು. ಆ ಸಾರಥಿಯ ಹೆಸರೇ ಅರುಣ!!
ಅದಕ್ಕಾಗಿ ಉದಯ(ಸೂರ್ಯ)ನನ್ನು ಕರೆದುಕೊಂಡು ರಥದ ಸಾರಥಿ ಅರುಣನೇ ಎಂದು ಅರುಣ+ ಉದಯ= ಅರುಣೋದಯ ಎಂದು ಕರೆಯುವುದು. ಈ ಅರುಣನ ತಮ್ಮನೇ ಮಹಾ ಪರಾಕ್ರಮಿ ಸ್ವಯಂ ನಾರಾಯಣನ ವಾಹನ ಗರುಡ!!!