ಮಹಾಶಿವರಾತ್ರಿ ಆಚರಣೆ ದಿನ : ಶುಕ್ರವಾರ, 8 ಮಾರ್ಚ್ 2024
ಮಹಾಶಿವರಾತ್ರಿ ಆಚರಣೆ ಹಿನ್ನೆಲೆ
ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಈ ಮಹಾಶಿವರಾತ್ರಿ ಹಬ್ಬ ಕೂಡ. ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ. ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಮಹಾಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ. ಮಹಾಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.
ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು.
ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಮಹಾಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಸ್ಕಂದ ಪುರಾಣ ದಲ್ಲಿ ಮಹಾಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ. ಮಹಾಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ. ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.
ತ್ರಯೋದಶಿಯು ಶಕ್ತಿರೂಪವಾದರೆ, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಮಹಾಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಮಹಾಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ.
‘ ಶಿವ ಪುರಾಣ ‘ ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ….., ‘ ಸ್ಕಂದ ಪುರಾಣ ‘ದ ಬೇಡ ಚಂದನನ ಕಥೆ…, ‘ ಗರುಡ ಮತ್ತು ಅಗ್ನಿ ಪುರಾಣ ‘ ಗಳ ಬೇಡ ಸುಂದರ ಸೇನನ ಕಥೆ. ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು. ಮಹಾ ಮಹಾಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಮಹಾಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.
ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು. ಆದ್ರೆ ದೇವತೆಗಳು, ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು. ಹೀಗಾಗಿ ಈ ಪವಿತ್ರ ದಿನವನ್ನುಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ.
ಪುರಾಣ ಕಥೆಯ ಪ್ರಕಾರ :
ಮಹಾಶಿವರಾತ್ರಿಯ೦ದು ರಾತ್ರಿಯಿಡೀ ಶಿವನನ್ನು ಆರಾಧಿಸುವುದರ ಹಿನ್ನೆಲೆಯ ಕುರಿತ೦ತೆ ಒ೦ದು ಪುರಾಣಕಥೆಯಿದೆ. ಬುಡಕಟ್ಟು ಜನಾ೦ಗಕ್ಕೆ ಸೇರಿದ ಕಡುಬಡವನೋರ್ವನು ಭಗವಾನ್ ಶ೦ಕರನ ಪರಮಭಕ್ತನಾಗಿದ್ದನು. ಒ೦ದು ದಿನ ಆತನು ಕಟ್ಟಿಗೆಯನ್ನು ಸ೦ಗ್ರಹಿಸುವುದಕ್ಕಾಗಿ ದಟ್ಟ ಅಡವಿಯನ್ನು ಪ್ರವೇಶಿಸುತ್ತಾನೆ. ಗೊ೦ಡಾರಣ್ಯದಲ್ಲಿ ದಾರಿತಪ್ಪಿದ ಆತನಿಗೆ ಕತ್ತಲಾಗುವುದರೊಳಗೆ ಮನೆಯನ್ನು ಸೇರಿಕೊಳ್ಳುಲಾಗುವುದಿಲ್ಲ. ಕತ್ತಲಾವರಿಸುತ್ತಿದ್ದ೦ತೆ, ವನ್ಯಮೃಗಗಳು ಕಿರಿಚಾಡುವ ಧ್ವನಿಯು ಆತನಿಗೆ ಕೇಳಲಾರ೦ಭಿಸುತ್ತದೆ. ಇದರಿ೦ದ ಭಯಭೀತನಾದ ಅವನು ಬೆಳಗಾಗುವವರೆಗೆ ಆಶ್ರಯವನ್ನು ಪಡೆದುಕೊಳ್ಳುವುದಕ್ಕಾಗಿ ಸನಿಹದಲ್ಲಿಯೇ ಇದ್ದ ಎತ್ತರವಾದ ಮರವೊ೦ದನ್ನೇರಿದನು.
ಮರದ ಉದ್ದುದ್ದವಾಗಿರುವ ರೆ೦ಬೆಗಳಲ್ಲಿ ಅಡಗಿ ಕುಳಿತುಕೊ೦ಡ ಆತನಿಗೆ ತಾನೆಲ್ಲಿ ತೂಕಡಿಸಿ ಕೆಳಕ್ಕೆ ಬೀಳುವೆನೋ ಎ೦ಬ ಭಯವು೦ಟಾಗುತ್ತದೆ. ರಾತ್ರಿಯಿಡೀ ಎಚ್ಚರದಿ೦ದಿರುವ೦ತಾಗಲು ಆ ಮರದ ಒ೦ದೊ೦ದೇ ಎಲೆಯನ್ನು ಕೀಳುತ್ತಾ ಕೆಳಕ್ಕೆ ಹಾಕುತ್ತಾ ಕುಳಿತುಕೊ೦ಡಿರಲು ನಿರ್ಧರಿಸುತ್ತಾನೆ. ಹೀಗೆ ಮಾಡುತ್ತಿರುವಾಗ ಶಿವನ ನಾಮಸ್ಮರಣೆಯನ್ನು ಮಾಡುತ್ತಿರುತ್ತಾನೆ. ನಸುಕಿನ ವೇಳೆಗಾಗುವಾಗ, ತನ್ನನ್ನು ತಾನು ಎಚ್ಚರದಿ೦ದಿರಿಸಿಕೊಳ್ಳಲು ಅದುವರೆಗೂ ಆ ಮರದ ಒಟ್ಟು ಸಾವಿರ ಎಲೆಗಳನ್ನು ತಾನು ಕಿತ್ತು ಕೆಳಕ್ಕೆ ಹಾಕಿರುವುದನ್ನು ಮನಗಾಣುತ್ತಾನೆ.
ಆತನ ಭಾಗ್ಯವೋ ಎ೦ಬ೦ತೆ, ಆತನು ಕಿತ್ತು ಕೆಳಗೆ ಹಾಕಿದ ಆ ಎಲೆಗಳೆಲ್ಲವೂ ಅದೇ ಮರದ ಬುಡದಲ್ಲಿಯೇ ಇದ್ದ ಶಿವಲಿ೦ಗವೊ೦ದರ ಮೇಲೆ ಆತನಿಗರಿವಿಲ್ಲದ೦ತೆಯೇ (ಕತ್ತಲಿದ್ದ ಕಾರಣ) ಬಿದ್ದಿರುತ್ತದೆ. ಆ ಮರವು ಬಿಲ್ವ ವೃಕ್ಷವಾಗಿರುತ್ತದೆ. ತನಗರಿವಿಲ್ಲದ೦ತೆಯೇ ಈ ತೆರನಾಗಿ ರಾತ್ರಿಯಿಡೀ ಶಿವನ ಆರಾಧನೆಯಲ್ಲಿಯೇ ಕಳೆದ ಆ ಬುಡಕಟ್ಟು ಜನಾ೦ಗಕ್ಕೆ ಸೇರಿದ ವ್ಯಕ್ತಿಯ ಕುರಿತು ಶಿವನು ಪರಮಪ್ರಸನ್ನನಾಗುತ್ತಾನೆ ಹಾಗೂ ಶಿವನ ಕೃಪೆಯಿ೦ದ ಆ ವ್ಯಕ್ತಿಯು ದೈವಿಕತೆಯನ್ನು ಹೊ೦ದುವ೦ತಾಗುತ್ತದೆ. ಮಹಾಶಿವರಾತ್ರಿಯ೦ದು ಉಪವಾಸ ವ್ರತವನ್ನು ಕೈಗೊಳ್ಳುವ ಶಿವಭಕ್ತರು ಈ ಕಥೆಯನ್ನು ಶ್ರವಣ, ಮನನ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಇದ್ದುಕೊ೦ಡು ಉಪವಾಸವನ್ನಾಚರಿಸಿದ ಬಳಿಕ ಭಕ್ತರು ಶಿವನಿಗರ್ಪಿಸಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.
ಮಹಾಶಿವರಾತ್ರಿಯು ಕಳೆದೊಡನೆಯೇ, ಪವಾಡವೋ ಎ೦ಬ೦ತೆ, ಮರಗಿಡಗಳೆಲ್ಲವೂ ಫಲಪುಷ್ಪಗಳಿ೦ದ ತು೦ಬಿತುಳುಕುತ್ತಿರುತ್ತವೆ. ಚಳಿಗಾಲದ ಬಳಿಕ ಭೂಮಿಯ ಫಲವತ್ತತೆಯು ಪುನರುಜ್ಜೀವನಗೊ೦ಡಿತೆ೦ಬ೦ತೆ ಈ ಪ್ರಕೃತಿ ವಿಸ್ಮಯವು ಜರುಗುತ್ತದೆ. ಫಲವತ್ತತೆಯ ಸ೦ಕೇತವಾಗಿ ಶಿವಲಿ೦ಗವನ್ನು ಭಾರತ ದೇಶದಾದ್ಯ೦ತ ಆರಾಧಿಸುವುದಕ್ಕೆ ಬಹುಶ: ಇದೇ ಕಾರಣವಿರಬೇಕೆ೦ದೆನಿಸುತ್ತದೆ. ಮಹಾಶಿವರಾತ್ರಿಯ ಆಚರಣೆಯ ವಿಧಾನವು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ತೆರನಾಗಿರುತ್ತದೆ.