ಸನಾತನ ಧರ್ಮವನ್ನು ಅನುಸರಿಸುವ ಜನರಿಗೆ ಪೂಜಾ ವಿಧಿ – ವಿಧಾನಗಳು ಅತ್ಯಂತ ಪ್ರಮುಖ ಚಟುವಟಿಕೆಯಾಗಿದೆ. ಹಿಂದೂ ಧರ್ಮದ ಜನರ ದಿನಚರಿ ಪೂಜೆ ಇಲ್ಲದೆ ಪ್ರಾರಂಭವಾಗುವುದಿಲ್ಲ.
ನಿತ್ಯ ಪೂಜಾ ಪುರಾಣೋಕ್ತ ವಿಧಾನ:
ಮುಂಜಾನೆ ಸ್ನಾನಾದಿ ಕೆಲಸ. ನಂತರ ಶುಚಿರ್ಭೂತರಾಗಿ ಬಂದು, ಒದ್ದೆ ಬಟ್ಟೆಯನ್ನು ಬದಲಾಯಿಸಿ, ಮಡಿವಸ್ತ್ರ ಉಟ್ಟುಕೊಳ್ಳಬೇಕು. ಶುಭ್ರವಾದ ಬಿಳಿ,ಹಳದಿ ಪಟ್ಟೆಯೋ ಅಥವಾ ಬಿಳಿ ಪಂಚೆಯೋ ಉಟ್ಟುಕೊಳ್ಳಬೇಕು. ನಂತರ ನಿತ್ಯ ದೇವರ ಅರ್ಚನೆಯ ಕೆಲಸ. ಹಿಂದಿನ ದಿನ ಅಲಂಕರಿಸಿದ್ದ ಹೂ ಹಾರಾದಿಗಳನ್ನು ವಿಸರ್ಜಿಸಬೇಕು. ಇದನ್ನು ದೇವರ ನಿರ್ಮಾಲ್ಯ ವಿಸರ್ಜನೆ ಎನ್ನುತ್ತೇವೆ. ಈ ಕೆಲಸ ಮಾಡುತ್ತಿರುವಾಗ ನಿಮಗೆ ಇಷ್ಟವಿದ್ದ ಶ್ಲೋಕ, ಭಜನೆ,ಹಾಡುಗಳನ್ನು ಹೇಳಬಹುದು.
ನಂತರ ದೇವರ ಕೋಣೆಯನ್ನು, ಪೀಠವನ್ನು ಶುಚಿಗೊಳಿಸಿ, ಮತ್ತೆ ಕೈಗಳನ್ನು ತೊಳೆದುಕೊಂಡು ದೇವರ ದೀಪ ಹಚ್ಚಿರಿ.
ದೀಪವು ಆಕಳ ತುಪ್ಪವೋ, ತಿಲ ತೈಲ( ಎಳ್ಳೆಣ್ಣೆ) ದಲ್ಲೋ ಉರಿಸಬೇಕು. ಒಂದು ದೀಪ ಸ್ತಂಬದಲ್ಲಿ ಒಂದೇ ಮುಖದ ದೀಪ ಇರಬೇಕು. ಕೆಲವೆಡೆ ಎರಡು ದೀಪಗಳನ್ನು ಹಚ್ಚುತ್ತಾರೆ. ಇದು ದ್ವಂದ್ವದ ಸಂಕೇತ. ಹೀಗೆ ಹಚ್ಚಬಾರದು. ದೀಪದ ಇಂಧನ (ಎಣ್ಣೆ) ಒಂದೇ ರೂಪದ್ದು ಇರಬೇಕು. ಇದರಲ್ಲಿ ಮಿಶ್ರಣ ಇರಬಾರದು. ಅಂದರೆ ಒಂದು ಎಣ್ಣೆಗೆ ಇನ್ನೊಂದು ಎಣ್ಣೆ ಸೇರಿಸುವಿಕೆ.
ದೀಪದ ಬತ್ತಿ ಎರಡರ ಜತೆ, ಮೂರರ ಜತೆ ಅಥವಾ ಐದರ ಜತೆ ಇರಬೇಕು. ಒಂದೇ ಬತ್ತಿ ಇರಬಾರದು. ಇದು ಪಂಚಭೂತಗಳ ಸಂಕೇತವಾಗುತ್ತದೆ. ದೀಪದ ಎಣ್ಣೆಯಲ್ಲಿ ಯಾವುದೇ ಕೀಟಗಳು ಬಿದ್ದಿದ್ದರೆ ಶುಚಿಗೊಳಿಸಿಯೇ ದೀಪ ಹಚ್ಚಬೇಕು. ದೀಪ ಸ್ತಂಭವು ಶುಚಿಯಾಗಿದ್ದರೆ ಆಯುರಾರೋಗ್ಯ ಐಶ್ವರ್ಯ ಸಂಪನ್ನತೆಯ ಸಂಕೇತವಾಗುತ್ತದೆ ಮತ್ತು ವೃದ್ಧಿಯಾಗುತ್ತದೆ.
ನಂತರ ತಾಮ್ರದ ಬಿಂದಿಗೆ ( ಚೊಂಬು)ಯಲ್ಲಿ ನೀರು ತರಬೇಕು. ಇದರ ಜತೆ ಒಂದು ಕೌಳಿಗೆ ಸೌಟು ಅಂದರೆ ಸಣ್ಣ ಲೋಟ ಮಾದರಿಯ ಪಾತ್ರೆ ಮತ್ತು ಚಮಚ ಇಟ್ಟುಕೊಳ್ಳಿ. ಇದನ್ನು ಉದ್ದರಣೆ ಎನ್ನುತ್ತೇವೆ. ಇದರಲ್ಲಿ ನೀರು ತುಂಬಸಿ. ನಂತರ ನೀವು ಸಂಗ್ರಹಿಸಿದ್ದ ಪುಷ್ಪ ತುಳಸಿಯನ್ನು ಬೇರೆ ಬೇರೆಯಾಗಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.
ಇನ್ನೊಂದೆಡೆ ದೇವರ ನೈವೇದ್ಯಕ್ಕಾಗಿ ನೆಲವನ್ನು ಶುಚಿಗೊಳಿಸಿ. ಅದರಲ್ಲಿ ಮೂರು ಸಣ್ಣ ಸಣ್ಣ ತಟ್ಟೆಗಳನ್ನಿಡಿ. ಸಾಮಾನ್ಯವಾಗಿ ಬೆಲ್ಲವನ್ನೇ ನೈವೇದ್ಯಕ್ಕೆ ಇಡಿ. ವಿಶೇಷವಿದ್ದರೆ ಅದನ್ನೂ ಇಡಬಹುದು. ಬೆಲ್ಲವು ಬೇಕೇ ಬೇಕು. ಇದನ್ನು ಗುಡೋಪಹಾರ ಎನ್ನುತ್ತೇವೆ. ಮೊದಲ ತಟ್ಟೆ ಗುರುಗಳಿಗೂ, ಎರಡನೆಯ ತಟ್ಟೆ ಗಣಪತಿಗೂ ನೈವೇದ್ಯ. ಮೂರನೆಯ ತಟ್ಟೆ ನಿಮ್ಮ ಮನೆ ದೇವರಿಗೆ. ಇತರ ದೇವರ ಪೂಜೆಗಳೂ ಇದ್ದಲ್ಲಿ ಆ ದೇವರಿಗೂ ಬೇರೆ ಬೇರೆ ತಟ್ಟೆಗಳಲ್ಲಿ ನೈವೇದ್ಯ ಇಡಬೇಕು. ಸಾಮಾನ್ಯವಾಗಿ ಈ ಮೂರು ತಟ್ಟೆಗಳ ನೈವೇದ್ಯ ಬೇಕೇ ಬೇಕು.
ನಂತರ ಈ ನೈವೇದ್ಯ ಪಾತ್ರೆಗಳಿಗೆ ಒಂದೊಂದು ತುಳಸಿ ದಳ. ( ಎಲೆ) ಹಾಕಿಡಬೇಕು. ತುಳಸಿ ದಳ ಹಾಕಿದ ನೈವೇದ್ಯವನ್ನು ದುಷ್ಟ ಶಕ್ತಿಗಳು ಮುಟ್ಟುವುದಿಲ್ಲ. ಇದರ ಜತೆ ತುಪ್ಪ ಇದ್ದರೆ ಅದನ್ನು ಇದಕ್ಕೆ ಒಂದೊಂದು ಬಿಂದು ಹಾಕಿದರೆ ತುಂಬಾ ಶ್ರೇಷ್ಟ. ಇದನ್ನು ಅನ್ನ ಶುದ್ಧಿ ಎನ್ನುತ್ತೇವೆ. ನಂತರ ಪೂಜೆ ಶುರುವಾಗುತ್ತದೆ.
೧. ಕೌಳಿಗೆ ನೀರಿಗೆ ಜಲಾಭಿಮಂತ್ರಣ.
ಒಂದು ತುಳಸಿ ಎಲೆ ಹಾಕಿ ನೀರಿನ ಪಾತ್ರೆಗೆ ಬಲ ಅಂಗೈಯನ್ನು ಮುಚ್ಚಿ,
‘ ಗಂಗೇ ಚ ಯಮುನೇ ಚೈವ, ಗೋಧಾವರಿ ಸರಸ್ವತಿ.ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು‘
ಎಂದು ನಮ್ಮ ಅಂಗೈಯ ಪಂಚ ನದಿಗಳ ಪ್ರವಾಹ ಶಕ್ತಿಯ ಮೂಲಕ ಆವಾಹನೆ ಮಾಡಬೇಕು.
ಇದಾದ ಬಳಿಕ ಒಂದು ಸೌಟು ನೀರನ್ನು ಕೆಳಗೆ ಬಿಟ್ಟು
‘ ಪ್ರಾಥಃಕಾಲೇ ನಿತ್ಯ ಪೂಜಾಂ ಕರಿಶ್ಯೇ‘
ಎಂದು ನಮ್ಮ ಸಂಕಲ್ಪದ ನಿವೇದನೆ ಮಾಡಬೇಕು.
೨. ನಂತರ ಈ ನೀರಿನಲ್ಲಿ ದೇವರಿಗೆ ಅಭಿಷೇಕ.
ಮೂರ್ತಿಗಳು, ಸಾಲಿಗ್ರಾಮಗಳಿದ್ದರೆ ಅಭಿಷೇಕ ಮಾಡಬೇಕು. ಕೇವಲ ಫೋಟೋ ಇದ್ದರೆ, ತುಳಸಿ, ಪುಷ್ಪಗಳನ್ನು ನೀರಿನಲ್ಲಿ ಮುಳುಗಿಸಿ ಪ್ರೋಕ್ಷಣೆ ( ಸಿಂಚನ) ಮಾಡಿದರೆ ಸಾಕು.
೩. ನಂತರ, ಮೂರ್ತಿಗಳಿದ್ದರೆ ಅದನ್ನು ಚನ್ನಾಗಿ ಒರಸಿಟ್ಟು , ಫೋಟೊ ಆಗಿದ್ದರೂ ಅದನ್ನು ಶುಚಿಗೊಳಿಸಿ, ಗಂಧ ಪುಷ್ಪಾದಿಗಳಿಂದ ಅಲಂಕರಿಸ ಬೇಕು. (ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾಡಿದರೆ ಸಾಕು)
೪. ನಂತರ ನಿಮಗೆ ತಿಳಿದಿರುವ ದೇವರ ಶ್ಲೋಕಗಳು,ಮೂಲ ಮಂತ್ರಗಳು, ಸಹಸ್ರನಾಮಗಳು ಹೀಗೇ ನೀವು ಸಂತೋಷಗೊಳ್ಳುವ ಉತ್ತಮ ಸ್ತುತಿಗಳನ್ನು ಮಾಡಬೇಕು. ಇದು ನಿತ್ಯ ಪೂಜೆಯಲ್ಲಿ ದೇವತಾ ಸ್ತುತಿಯ ಕಾಲ.
೫. ಇದಾದ ನಂತರ ದೇವರಿಗೆ ನೈವೇದ್ಯ ಸಮರ್ಪಣೆ. ಅಂದರೆ ದೇವರ ಊಟ.
ಮೊದಲು ಗುರುವಿಗೆ ಸಮರ್ಪಣೆ. ನಂತರ ಗಣಪತಿಗೆ. ಕೊನೆಗೆ ಮನೆದೇವರಿಗೆ. ಇದಾದ ಬಳಿಕ ಇಷ್ಟದೇವರಿಗೆ ಪೂಜೆಗಳಿದ್ದರೆ ಪೂಜೆ, ಸಮರ್ಪಣೆ ಮಾಡಬೇಕು.
೬. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಾಯ ಸ್ವಾಹಾ ಎಂದು ಐದುಬಾರಿ ತಿನ್ನಿಸಬೇಕು.
ಅಂದರೆ ತಿನ್ನುಸುವ ಸಂಜ್ಞೆ ಮಾಡಬೇಕು. ಇದಾದನಂತರ ಕೈ ತೊಳೆದುಕೊಂಡು ತಂಬಿಗೆಯ ನೀರನ್ನು ಹಿಡಿದು
‘ ಹರಿಃ ಕೃಷ್ಣಾರ್ಪಣ ಮಸ್ತು‘
ಎಂದು ನಮಸ್ಕರಿಸಬೇಕು. ನಂತರ ದೇವರ ಮೇಲಿನಿಂದ ಹೂವೊಂದನ್ನು ತೆಗೆದು ನೈವೇದ್ಯ ಪಾತ್ರೆಗೆ ಹಾಕಿ ಒಂದು ಸೌಟು ನೀರು ಕೆಳಗೆ ಬಿಡಿ.
೭. ಕೊನೆಗೆ ಮಂಗಳಾರತಿ ಮಾಡಬೇಕು.
೮. ಈಗ ಈ ದಿನದ ಪೂಜಾ ಸಮಾಪ್ತಿ.
ಬಲ ಕೈಯಲ್ಲಿ ಪುಷ್ಪ ತುಳಸಿ ಗಂಧ ಹಿಡಿದು ಉದ್ಧರಣೆಯಲ್ಲಿ ನೀರುಹಾಕುತ್ತಾ
‘ಓ ತತ್ಸತ್ ನಿತ್ಯ ಪೂಜಾಂ ಕರಣೇನ ಭಗವಾನ್ ಸರ್ವಾತ್ಮಕ ಶ್ರೀ ಲಕ್ಷ್ಮೀ ನಾರಾಯಣ ಪ್ರಿಯಂತಾಂ.‘
ಎಂದು ಪ್ರಾರ್ಥಿಸಿ ದೇವರಿಗೆ ಪುಷ್ಪ ಹಾಕಬೇಕು. ನಂತರ ಘಂಟಾಮಣಿಯನ್ನು ಒಮ್ಮೆ ಆಡಿಸಿ ಇಡಬೇಕು.
ನಂತರ ವಿತರಣೆಗೆ ಬೇಕಾಗುವಷ್ಟು ಪುಷ್ಪಗಳನ್ನು ತೆಗೆದು ಹರಿವಾಣದಲ್ಲಿ ಹಾಕಿಕೊಳ್ಳಬೇಕು. ಒಮ್ಮೆ ತೀರ್ಥ ಸೇವಿಸಿದ ನಂತರ ದೇವರನ್ನು ಸ್ನಾನ ಮಾಡದೆ ಮುಟ್ಟಬಾರದೆಂಬ ರೂಢಿ ಇದೆ.
ಕೊನೆಗೆ ನಿಂತಲ್ಲೇ ಪ್ರದಕ್ಷಿಣೆ ಹಾಕುತ್ತಾ
‘ಯಾನಿಕಾನಿ ಜಪಾಪಾನಿ ಜನ್ಮಾಂತರ ಕೃತಾನಿಚ. ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇಪದೇ.‘ ಎನ್ನುತ್ತಾ ದೇವರಿಗೆ ನಮಸ್ಕರಿಸಿ ಪೂಜೆ ಕೊನೆಗೊಳಿಸುವುದು.
ಜನ್ಮಾಂತರ ಪಾಪ, ನಿತ್ಯವೂ ಮಾಡಿಹೋಗುವ ಸಕಲ ಅಜ್ಞಾತ, ಅನಿವಾರ್ಯ ಪಾಪಗಳು ತೊಲಗಲೀ ಎಂಬ ಭಾವನೆಯಿಂದ ನಮಸ್ಕಾರ ಮಾಡಬೇಕು.
ದೇವರ ಸಾಹಿತ್ಯ ಪಾತ್ರೆಗಳು ಮಲಿನವಿರಬಾರದು. ದೇವರ ದೀಪವೂ ಶುಭ್ರವಾಗಿರಬೇಕು. ಸುವಾಸನಾಬರಿತವಾಗಿ ದೇವರ ಕೋಣೆಯನ್ನು ಅಚ್ಚುಕಟ್ಟಾಗಿ ಇಡಬೇಕು. ದೇವರ ಕೋಣೆಯು ಮನೆಯಹೃದಯವಾಗುತ್ತದೆ. ಪೂಜಾ ಕಾಲದ ಮಧ್ಯದಲ್ಲಿ ದೇವರ ಸಾಹಿತ್ಯ ವಿಚಾರ ಬಿಟ್ಟು ಬೇರೆ ಯಾವುದೇ ಮಾತುಗಳನ್ನಾಡಬಾರದು. ಯಾರನ್ನೂ ದ್ವೇಷಿಸುವ ಚಿಂತನೆ, ಯೋಚನಗಳನ್ನೂ ಮಾಡಬಾರದು. ಇಷ್ಟನ್ನು ಭಕ್ತಿಪೂರ್ವಕವಾಗಿ ಮಾಡಿಕೊಂಡು ಬಂದಲ್ಲಿ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ.
ಯಾವುದೇ ಬೇಡಿಕೆಗಳಾಗಲೀ, ಹರಕೆಗಳನ್ನಾಗಲೀ ದೇವರ ಮುಂದೆ ನಿಂತು ನಿವೇದಿಸಬಾರದು. ಕೇವಲ ಅಜ್ಞಾತವಾದ, ಅನಿವಾರ್ಯದಿಂದ ಉಂಟಾದ ಪಾಪಗಳಿಗೆ ಕ್ಷಮಾಯಾಚನೆ ಮಾಡಬೇಕು. ಅದು ಮತ್ತೆ ಮರುಕಳಿಸದಂತೆ ಉತ್ತಮ ಜ್ಞಾನಕ್ಕಾಗಿ ಪ್ರಾರ್ಥನೆ ಮಾಡಬೇಕು. ಜ್ಞಾನವಿದ್ದಾಗ ಅಪರಾಧಗಳಾಗಲು ಸಾಧ್ಯವಿಲ್ಲ. ಜ್ಞಾನ ಶೂನ್ಯನಾದಾಗಲೇ ಉದ್ವೇಗ ಉಂಟಾಗಿ ಅಪರಾಧಗಳಾಗುತ್ತದೆ.
ಪೂಜಾ ಸಮಯದಲ್ಲಿ ವೆತ್ಯಾಸ ಮಾಡಬಾರದು. ಒಂದು ವೇಳೆ ಮನೆಯಲ್ಲಿ ಇಲ್ಲದಿದ್ದರೆ ಕೇವಲ ಸ್ಮರಣೆ ಮಾಡಿದರೆ ಸಾಕು. ಅನಾರೋಗ್ಯ ಇದ್ದಾಗಲೂ ದೇವರ ಸ್ಮರಣೆ ಮಾಡಿದರೆ ಸಾಕು.
ಕೃಪೆ : ಪ್ರಕಾಶ್ ಅಮ್ಮಣ್ಣಾಯ